Apply Now
Enquire Now
SKIT, Bangalore logo

College CET CODE E112

Blog

2021
ಥಿಯರಿ ಆಫ್ ರಿಲೇಟಿವಿಟಿ ಹಾಗೂ ಭಾರತೀಯ ಪುರಾಣ !
Written by Puneeth Kumar CSE 6th Sem, B sec

ಸ್ನೇಹಿತರೆ, ನೀವು ಥಿಯರಿ ಆಫ್ ರಿಲೇಟಿವಿಟಿ ಬಗ್ಗೆ ಕೇಳಿದ್ದೀರಿ ಅಲ್ಲವೇ? ಕಾಲ ಅಥವಾ ಸಮಯ, ಚಲನೆಯ ವೇಗಕ್ಕೆ ತಕ್ಕಹಾಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬದಲಾಗತ್ತೆ ಅಂತ ಹೇಳುವ ಈ ಥಿಯರಿ ಆಫ್ ರಿಲೇಟಿವಿಟಿಯನ್ನು ಐನ್ಸ್ಟೀನ್(Einstein) ಹೇಳಿದ್ದು 1915ರಲ್ಲಿ. ಯಾವುದೇ ಒಂದು ವಸ್ತು ಬೆಳಕಿನ ವೇಗದಲ್ಲಿ ಚಲಿಸಿದಾಗ ಅಲ್ಲಿ ಸಮಯ ನಿಧಾನವಾಗುತ್ತದೆ. ಇದನ್ನು ಅವರು Time Dilation Theory ಅಂತ ಹೇಳಿದ್ದಾರೆ. ಹಾಗಂತ ಐನ್ಸ್ಟೀನ್ ಹೇಳೋವರೆಗೆ ಇದು ಜಗತ್ತಿಗೆ ಗೊತ್ತೇ ಇರಲಿಲ್ವಾ?

ನಮ್ಮ ಸಾಕಷ್ಟು ಗ್ರಂಥಗಳಲ್ಲಿ, ಭಗವದ್ಗೀತೆಯಲ್ಲಿ, ಭಾಗವತ ಪುರಾಣಗಳಲ್ಲಿ, ಸ್ಕಂದ ಪುರಾಣಗಳಲ್ಲಿ, ವಿಷ್ಣು ಪುರಾಣದಲ್ಲಿ ಹೀಗೆ ನಾನಾ ಕಡೆಗಳಲ್ಲಿ ಇದೇ ಸಾಪೇಕ್ಷ ಸಿದ್ಧಾಂತ ಅಥವಾ ಥಿಯರಿ ಆಫ್ ರಿಲೇಟಿವಿಟಿ ಬಗ್ಗೆ ಹೇಳಲಾಗಿದೆ ಅಂದ್ರೆ ನಿಮಗೆ ಆಶ್ಚರ್ಯ ಅನಿಸಬಹುದು !

ನಮ್ಮ ಪುರಾತನ ಗ್ರಂಥಗಳಲ್ಲಿ ಕಂಡುಬರುವ ಕಥೆಗಳಲ್ಲಿ ಈ "ಥಿಯರಿ ಆಫ್ ರಿಲೇಟಿವಿಟಿಯನ್ನು ನಾವು ತಿಳಿದು ಕೊಳ್ಳಬಹುದು. ಸ್ನೇಹಿತರೆ, ಅದಕ್ಕಾಗಿ ಈ ಒಂದು ಕಥೆಯನ್ನು ಆಲಿಸಿ.

ದೇವರಾಜ ಇಂದ್ರ ನಿಮಗೆಲ್ಲ ಗೊತ್ತಲ್ಲ? ಇಂದ್ರನ ನಾಯಕತ್ವದಲ್ಲಿ ದೇವತೆಗಳು ದಾನವರ ವಿರುದ್ಧ ಹೋರಾಟ ಮಾಡ್ತಾ ಇರ್ತಾರೆ. ಆಗ ಭೂಲೋಕದಲ್ಲಿನ ಅತ್ಯಂತ ಶಕ್ತಿಶಾಲಿಯೂ, ಪರಾಕ್ರಮಿಯೂ ಆಗಿದ್ದ ಚಕ್ರವರ್ತಿ ಮುಚಕುಂದನ ಬೆಂಬಲವನ್ನ ಈ ಯುದ್ಧಕ್ಕಾಗಿ ಕೇಳ್ತಾನೆ ಇಂದ್ರ. ಸರಿ! ದೇವರಾಜ ಕೇಳಿದ್ಮೇಲೆ ಇಲ್ಲ ಅನ್ನೋದಕ್ಕಾಗತ್ಯೇ? ಚಕ್ರವರ್ತಿ ಮುಚಕುಂದ ಅದಕ್ಕೆ ಒಪ್ಪಿಕೊಂಡ. ಒಂದಷ್ಟು ವರ್ಷಗಳ ಕಾಲ ದೇವ-ದಾನವರ ನಡುವೆ ಯುದ್ಧ ನಡೀತು. ದೇವತೆಗಳಿಗೆ ಗೆಲುವು ಕೂಡ ಸಿಕ್ತು. ಅಷ್ಟರಲ್ಲಿ ದೇವಸೇನೆಯ ಪತಿಯಾಗಿ ಶಿವ ಪುತ್ರ ಕಾರ್ತಿಕೇಯ ಬಂದಿದ್ದ .ಹೀಗಾಗಿ " ಇನ್ನು ನಾನು ಭೂಲೋಕಕ್ಕೆ ಹೋಗ್ತೀನಿ, ನನಗೆ ಅನುಮತಿ ಕೊಡು " ಅಂತ ದೇವೇಂದ್ರನನ್ನ ಕೇಳ್ತಾನೆ ರಾಜ ಮುಚಕುಂದ. ಆದ್ರೆ ಅವನನ್ನ ಭೂಲೋಕಕ್ಕೆ ಕಳುಹಿಸಿಕೊಡೋದಕ್ಕೆ ಇಂದ್ರ ಸ್ವಲ್ಪ ಹಿಂದೇಟು ಹಾಕೋದಕ್ಕೆ ಶುರು ಮಾಡ್ದ. "ಮುಚಕುಂದ, ನಿನ್ಗೆ ಇಲ್ಲೇ ಒಂದು ಒಳ್ಳೇ ಪದವಿಯನ್ನ ಕೊಡ್ತೀವಿ, ನನ್ನ ಸಂಗಡ ನೀನು ಈ ಲೋಕದಲ್ಲೇ ಇದ್ದುಬಿಡು ", ಇಂದ್ರ ಆಹ್ವಾನ ಕೊಟ್ಟ. ಆದ್ರೆ ಮುಚಕುಂದ ಅದಕ್ಕೆ ಸಿದ್ಧ ಇರ್ಲಿಲ್ಲ. "ಇಂದ್ರ ದೇವಾ, ನಾನೇನಿದ್ರು ಇಲ್ಲಿಗೆ ನಿನ್ನ ಆಹ್ವಾನದ ಮೇರೆಗೆ ಬಂದ ಅತಿಥಿಯಷ್ಟೇ. ನನ್ನ ಕುಟುಂಬ ಪರಿವಾರ ಎಲ್ಲಾ ಭೂಲೋಕದಲ್ಲಿ ನನಗಾಗಿ ಕಾದಿದೆ. ಹೀಗಾಗಿ ನನಗೆ ನನ್ನ ಭೂಮಿಗೆ ಹಿಂತಿರುಗಲು ಅವಕಾಶ ಮಾಡಿ ಕೊಡು " ಅಂತ ಅತ್ಯಂತ ನಮ್ರತೆಯಿಂದ ಕೇಳ್ಕೊಳ್ತಾನೆ ಮುಚಕುಂದ. ಈಗ ಇಂದ್ರನಿಗೆ ಸತ್ಯವನ್ನ ಹೇಳಲೇ ಬೇಕಾದ ಅನಿವಾರ್ಯ. ಸಿಂಹಾಸನದಿಂದ ಮೇಲೆದ್ದ ಇಂದ್ರ, ನಿಧಾನವಾಗಿ ಮುಚಕುಂದನ ಬಳಿ ಬಂದು ಅವನ ಹೆಗಲ ಮೇಲೆ ಕೈ ಹಾಕಿ ಮೆಲುದನಿಯಲ್ಲಿ ಅವನಿಗೊಂದು ಭಯಾನಕ ಸತ್ಯವನ್ನ ಹೇಳೋದಕ್ಕೆ ಮುಂದಾದ, ಇಂದ್ರ ದೇವಾ. "ಮಹಾರಾಜಾ ನೀನಿಲ್ಲಿಗೆ ಬಂದು ವರ್ಷಗಳು ಕಳೆದುಹೋಗಿವೆ. ಅಲ್ಲಿ ಭೂಮಿಯ ಮೇಲೆ ನಿನ್ನವರು ಅಂತ ಯಾರು ಈಗ ಉಳಿದಿಲ್ಲ". ಈ ಮಾತನ್ನ ಕೇಳಿ ಮುಚಕುಂದನಿಗೆ ಆಕಾಶವೇ ತಲೆ ಮೇಲೆ ಬಿದ್ದ ಅನುಭವ, "ನನ್ನವರು ಯಾರು ಇಲ್ವಾ?" ಮುಚಕುಂದನ ದನಿಯಲ್ಲಿ ನೋವು ಆತಂಕ ಆಘಾತಗಳಿದ್ವು. ಇಂದ್ರದೇವ ಧೀರ್ಘವಾಗಿ ಉಸಿರೆಳೆದುಕೊಂಡು ಹೇಳ್ದ "ಮಹಾರಾಜಾ ಮುಚಕುಂದಾ ನನ್ನ ಮಾತುಗಳನ್ನ ಗಮನವಿಟ್ಟು ಶಾಂತಚಿತ್ತನಾಗಿ ಕೇಳು. ನೀನು ಅಂದುಕೊಂಡಹಾಗೆ ಅಲ್ಲಿ ಏನು ಆಗಿಲ್ಲ ಆದ್ರೆ ಕಾಲನ ಕರೆಯನ್ನ ನಿರಾಕರಿಸೋಕೆ ಯಾರಿಂದಲೂ ಸಾಧ್ಯ ಇಲ್ಲ.

ಭೂಲೋಕಕ್ಕೂ ದೇವಲೋಕಕ್ಕೂ ಕಾಲದ ವ್ಯತ್ಯಯ ಇದೆ. ದೇವಲೋಕದ ಲೆಕ್ಕದಲ್ಲಿ ನೀನಿಲ್ಲಿಗೆ ಬಂದು ಎರಡು ವರ್ಷಗಳು ಕಳೆದಿವೆ ಆದ್ರೆ ಭೂಲೋಕದಲ್ಲಿ ಈಗಾಗ್ಲೇ ಸಹಸ್ರಾರು ವರ್ಷಗಳು ಕಳೆದುಹೋಗಿವೆ. ಈ ಕಾಲಾಂತರ ಇದ್ಯಲ್ಲ ಇದು ನಿನ್ನ ಬಂಧು ಬಳಗವನ್ನ ಭೂಲೋಕದಲ್ಲಿ ಇಲ್ಲದಹಾಗೆ ಮಾಡಿದೆ. ಹೀಗಾಗಿ ನೀನಲ್ಲಿಗೆ ಹೋಗಿ ಏನು ಪ್ರಯೋಜನ ಇಲ್ಲ. ಇಲ್ಲೇ ಇರುವ ಮನಸ್ಸು ಮಾಡು" -ಇಂದ್ರ ಶಾಂತಚಿತ್ತನಾಗಿ ವಿಷಯವನ್ನ ಮುಚಕುಂದನಿಗೆ ತಿಳಿಸಿದ. ಸಹಸ್ರಾರು ವರ್ಷಗಳು ಕಳೆದುಹೋಗಿವೆ ಅನ್ನೋದನ್ನ ಕೇಳಿನೇ ಮುಚಕುಂದ ಆಘಾತಕ್ಕೀಡಾಗುತ್ತಾನೆ. ಒಂದು ಕ್ಷಣ ಸುಮ್ಮನಿದ್ದವನು ಧೀರ್ಘವಾಗಿ ಉಸಿರೆಳೆದುಕೊಂಡ, ಆನಂತರ ಹೇಳ್ದ " ಆಯ್ತು ದೇವೇಂದ್ರ ನಾನು ನನ್ನ ಭೂಲೋಕಕ್ಕೆ ಹೋಗ್ತೀನಿ, ಸಾಧ್ಯವಾದ್ರೆ ನನಗೆ ಒಂದು ಉಪಕಾರ ಮಾಡು. ನಾನು ಈ ಯುದ್ಧಗಳಿಂದ ದಣಿದು ಹೋಗಿದ್ದೀನಿ. ಯುದ್ಧಕ್ಕಿಂತ ಹೆಚ್ಚಾಗಿ ನನ್ನವರು ಯಾರು ಭೂಮಿಯ ಮೇಲೆ ಇಲ್ಲ ಅನ್ನೋದನ್ನ ಕೇಳಿ ನನ್ನ ಮನಸ್ಸು ವ್ಯಾಕುಲಗೊಂಡು ದಣಿವಿಗೆ ಬಿದ್ದಿದೆ. ನನಗೀಗ ನಿದ್ರೆ ಬೇಕು. ವಿಶ್ರಾಂತಿ ಬೇಕು ನನಗೆ ಇಷ್ಟವಾದಷ್ಟು ದಿನ ನಿದ್ರಿಸುವ ವರವನ್ನ ನನಗೆ ಕೊಡು" ಅಂತ ಕೇಳ್ತಾನೆ ಮುಚಕುಂದ. ಇಂದ್ರನಿಗೆ ಕೂಡ ಮನದಾಳದಲ್ಲಿ ಬೇಸರ, ದುಃಖ ಮಡುವು ಕಟ್ಟಿತ್ತು. ಆದ್ರೆ ಅವನಾದ್ರೂ ಏನ್ ಮಾಡ್ಯಾನು? ಕಾಲನ ಮುಂದೆ ಎಲ್ಲರು ಚಿಕ್ಕವರೇ . ತಥಾಸ್ತು ಅಂದ ಇಂದ್ರ ದೇವಾ. ಮುಚಕುಂದ ಭೂಲೋಕದ ಗುಹೆಯೊಂದರಲ್ಲಿ ನಿದ್ರೆಗೆ ಜಾರಿ ಹೋದ . ಮುಂದೆ ಕೃಷ್ಣ ಹಾಗು ಕಾಲಯವನ ಯುದ್ಧದ ಸಮಯದಲ್ಲಿ ಇದೆ ಮುಚಕುಂದನ ನಿದ್ರಾಭಂಗವಾಗಿ ಕಾಲಯವನನ್ನ ಅವನು ಭಸ್ಮ ಮಾಡ್ದ ಅಂತ ಈ ಕಥೆ ಮುಂದುವರೆಯತ್ತೆ.

ಇಲ್ಲಿ ಮುಚಕುಂದ ಅನ್ನೋ ಮಹಾರಾಜನೊಬ್ಬನ ಕಥೆಯ ಮೂಲಕ ನಮಗೆ ಹೇಳೋಕೆ ಹೊರಟಿರೋದು ಸಾಪೇಕ್ಷ ಸಿದ್ಧಾಂತವನ್ನ. ಕಾಲ ಅನ್ನೋದು ಭೂಮಿಯ ಮೇಲೆ ಮತ್ತು ಆಕಾಶದ ಮತ್ತೊಂದು ಗ್ಯಾಲಕ್ಸಿಯಲ್ಲಿ ಅಥವಾ ಮತ್ತೊಂದು ಲೋಕದಲ್ಲಿ ಬೇರೆ ಬೇರೆಯಾಗಿರುತ್ತೆ. ಭೂಮಿಯ ಮೇಲಿನ ವ್ಯಕ್ತಿಯೊಬ್ಬ ಮತ್ತೊಂದು ಗ್ಯಾಲಕ್ಸಿಗೆ ಹೋದಾಗ ಅವನ ವಯಸ್ಸು ಹೆಚ್ಚು ಬೆಳೆಯೋದಿಲ್ಲ ಅಂತ ಹೇಳ್ತ ಇದೆ ಈ ಕಥೆ.

ನಿಮಗೆ ಗೊತ್ತಿರೋ ಹಾಗೆ ಭೂಮಿಯ ಮೇಲಿನ ಕಾಲದ ಚಲನೆಗೂ, ಚಂದ್ರನ ಮೇಲಿನ ಕಾಲದ ಚಲನೆಗೂ 14 ದಿನಗಳ ವ್ಯತ್ಯಾಸ ಇದೆ. ಭೂಮಿಯ ಮೇಲಿನ ಹದಿನಾಲ್ಕು ದಿನಗಳು ಅಂದ್ರೆ ಚಂದ್ರನ ಮೇಲಿನ ಒಂದು ದಿನ ಆಗುತ್ತೆ. ಅಲ್ಲಿಗೆ ಒಂದುದಿನ ಅನ್ನೋ ಭೂಮಿಯ ಮೇಲಿನ ಕಾಲಮಾನಕ್ಕೂ, ಚಂದ್ರನ ಮೇಲಿನ ಒಂದು ದಿನದ ಕಾಲಮಾನಕ್ಕೂ, ಬೇರೆ ಬೇರೆ ಗ್ರಹಗಳು ಅಥವಾ ಗ್ಯಾಲಕ್ಸಿ ಗಳ ಮೇಲಿನ ಕಾಲಮಾನಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಅಂತ ಆಯ್ತಲ್ಲ! ಇದನ್ನೇ ಥಿಯರಿ ಆಫ್ ರಿಲೇಟಿವಿಟಿ ಅಂತ ಮಹಾವಿಜ್ಞಾನಿ ಐನ್ಸ್ಟೀನ್ ಹೇಳ್ತಾನೆ ಮತ್ತು ಇದೆ ವ್ಯತ್ಯಾಸವನ್ನೇ ಸಹಸ್ರಾರು ವರ್ಷಗಳ ಮೊದಲೇ ನಮ್ಮ ಪುರಾಣ ಗ್ರಂಥಗಳು ಹೇಳುತ್ತಾ ಬಂದಿವೆ.

ಒಂದು ಚಲಿಸುವ ವಸ್ತುವನ್ನ ಬೆಳಕಿನ ವೇಗದಲ್ಲಿ ಕಳುಹಿಸಿದಾಗ ಆ ವಸ್ತುವಿನ ಸಮಯ ಅಥವಾ ಕಾಲ ಅಥವಾ ವಯಸ್ಸು ನಿಧಾನಗೊಳ್ಳುತ್ತೆ ಅಥವಾ ಸ್ಥಗಿತ ಗೊಳ್ಳುತ್ತೆ ಅನ್ನೋದನ್ನ Time Dilation Theory ರೂಪದಲ್ಲಿ ಐನ್ಸ್ಟೀನ್ ಹೇಳ್ತಾರೆ. ಒಂದು ಅಧ್ಭುತವಾದ ಜ್ಞಾನವನ್ನ ಅದೆಷ್ಟು ಸರಳ ಮಾಡಿ ನಮ್ಮ ಪುರಾತನ ವಿಜ್ಞಾನಿಗಳು ಕಥೆಗಳ ರೂಪದಲ್ಲಿ ಹೇಳಿದ್ದಾರೆ ಅಲ್ವಾ?!

ಇಷ್ಟೊಂದು ವಿಷಯವನ್ನ ಒಂದೇ ಧಾಟಿಯಲ್ಲಿ ಒಂದು ಕಥೆಯ ಮೂಲಕ ಹೇಳೋದು ಅಂದ್ರೆ ಅವರ ಪಾಂಡಿತ್ಯ ಹಾಗು ವಿಜ್ಞಾನದ ಬಗೆಗಿನ ತಿಳುವಳಿಕೆಗೆ ನಾವು ಕೃತಜ್ಞರಾಗಿರಬೇಕು!

Source : Media Masters ( https://youtu.be/Ttq2jkhZsKw )